ರಾಮದುರ್ಗ
	ಭಾರತದ ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಒಂದು ತಾಲ್ಲೂಕು ಹಾಗೂ ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಗೋಕಾಕ ಮತ್ತು ಬಿಜಾಪುರ ಜಿಲ್ಲೆಯ ಮುಧೋಳ ತಾಲ್ಲೂಕುಗಳು, ಪಶ್ಚಿಮ ಮತ್ತು ನೈಋತ್ಯದಲ್ಲಿ ಸವದತ್ತಿ (ಪರಸಗಡ) ತಾಲ್ಲೂಕು, ಆಗ್ನೇಯ ಮತ್ತು ದಕ್ಷಿಣದ ಸ್ವಲ್ಪಭಾಗ ಧಾರವಾಡ ಜಿಲ್ಲೆಯ ನರಗುಂದ ತಾಲ್ಲೂಕು, ಪೂರ್ವಕ್ಕೆ ಬಿಜಾಪುರ ಜಿಲ್ಲೆಯ ಬಾದಮಿ ತಾಲ್ಲೂಕು ಸುತ್ತುವರಿದಿವೆ. 103 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 125.1 ಚ.ಕಿ.ಮೀ. ಜನಸಂಖ್ಯೆ 2,27,255 (2001).

	ಎರೆಮಣ್ಣಿನ ಭೂಮಿಯಿಂದ ಕೂಡಿದ ಈ ತಾಲ್ಲೂಕಿನಲ್ಲಿ ಬೆಟ್ಟಗಳಿಲ್ಲ. ಅಲ್ಲಲ್ಲಿ ಸಣ್ಣ ಪುಟ್ಟ ಗುಡ್ಡಗಳನ್ನೂ ಕುರಚಲು ಕಾಡುಗಳನ್ನೂ ಕಾಣಬಹುದು. ತಾಲ್ಲೂಕಿನ ಹವೆ ಹಿತಕರವಾಗಿದೆ. ಮಲೆನಾಡಿನ ನೆರೆನಾಡಾಗಿರುವ ಈ ತಾಲ್ಲೂಕಿನಲ್ಲಿ ಸಾಕಷ್ಟು ಮಳೆ ಆಗುವುದು. ವಾರ್ಷಿಕ ಸರಾಸರಿ ಮಳೆ 538.83 ಮಿಮೀ.

	ಈ ತಾಲ್ಲೂಕಿನ ದಕ್ಷಿಣದಲ್ಲಿ ಹರಿಯುವ ಮಲಪ್ರಭಾ ಇಲ್ಲಿನ ಮುಖ್ಯನದಿ. ಈ ನದಿ ಬೊಚಬಾಳ ಗ್ರಾಮದ ಉತ್ತರದಲ್ಲಿ ತಾಲ್ಲೂಕನ್ನು ಪ್ರವೇಶಿಸಿ, ಹಳೆತೊರೆಗಲ್ ಗ್ರಾಮದ ಉತ್ತರದವರೆಗೂ ಬಳಸಿಕೊಂಡು ರಾಮದುರ್ಗದ ಮುಖಾಂತರ ತಿಳಬನೂರು ಗ್ರಾಮದವರೆಗೆ ದಕ್ಷಿಣಾಭಿಮುಖವಾಗಿ ಮುಂದುವರಿದು, ಅನಂತರ ಸ್ವಲ್ಪದೂರ ಹಲಗಟ್ಟಿ ಗ್ರಾಮದವರೆಗೆ ಮೇಲೇರಿ ಮುಂದೆ ತಾಲ್ಲೂಕನ್ನು ಬಿಟ್ಟು ಬಾದಾಮಿ ತಾಲ್ಲೂಕನ್ನು ಪ್ರವೇಶಿಸುವುದು. ಮಲಪ್ರಭಾ ನದಿಗೆ ಕೊಳಚಿ ಎಂಬಲ್ಲಿ ಒಂದು ಸಣ್ಣ ಅಣೆಕಟ್ಟನ್ನು ನಿರ್ಮಿಸಿ ನೀರಾವರಿಗೆ ಅನುಕೂಲ ಕಲ್ಪಿಸಲಾಗಿದೆ. ಈ ನದಿಯ ದಂಡೆ ವ್ಯವಸಾಯ ಯೋಗ್ಯವಾಗಿದ್ದು ನೀರಾವರಿಗೆ ಅನುಕೂಲ ದೊರೆಯುತ್ತದೆ. ಈ ತಾಲ್ಲೂಕಿನ ಉತ್ತರದಲ್ಲಿ ಕೆಲವು ಚಿಕ್ಕ ಹಳ್ಳಗಳು ಹರಿಯುವುದುಂಟು. ಅವು ಬೇಸಗೆಯಲ್ಲಿ ಬತ್ತಿಹೋಗುವುವು. ತಾಲ್ಲೂಕಿನ ಅತ್ಯಂತ ದಕ್ಷಿಣದಲ್ಲಿ ಚಾಟಹಳ್ಳ ಹರಿಯುವುದು. ಇದು ತಾಲ್ಲೂಕಿನ ಕಡ್ಲಿಕೊಪ್ಪ ಗ್ರಾಮದ ಉತ್ತರದಲ್ಲಿ ತಾಲ್ಲೂಕನ್ನು ಬಿಡುವುದು. ಇದು ಕೊಡ ತಾಲ್ಲೂಕಿನಲ್ಲಿ ತಕ್ಕ ಮಟ್ಟಿಗೆ ನೀರಾವರಿಗೆ ಉಪಯುಕ್ತವಾಗಿದೆ.

	ಈ ತಾಲ್ಲೂಕಿನ ಹೆಚ್ಚು ಭಾಗ ಎರೆಮಣ್ಣಿನ ಭೂಮಿಯಾಗಿದ್ದು ಶೇಂಗಾ, ಜೋಳ ಮತ್ತು ಹತ್ತಿ ಇಲ್ಲಿನ ಪ್ರಮುಖ ಬೆಳೆಗಳು. ಜೊತೆಗೆ ಕೆಲವು ದ್ವಿದಳ ಧಾನ್ಯಗಳನ್ನು ಬೆಳೆಯುವುದುಂಟು. ಈ ತಾಲ್ಲೂಕಿನಲ್ಲಿ ವ್ಯವಸಾಯವೇ ಪ್ರಧಾನವಾದರೂ ಖಾದ್ಯ ತೈಲ, ಕೈಮಗ್ಗದ ಬಟ್ಟೆ ಮತ್ತು ಬೆಲ್ಲ ತಯಾರಿಸಿ ಹೊರಗೆ ಕಳುಹಿಸುವುದು. ಚರ್ಮವಸ್ತುಗಳ ತಯಾರಿಕೆಯೂ ಉಂಟು. ಮರದ ವಸ್ತುಗಳ ತಯಾರಿಕೆಯೂ ಸ್ವಲ್ಪ ಮಟ್ಟಿಗೆ ಇದೆ.

	ತಾಲ್ಲೂಕಿನಲ್ಲಿ ರಸ್ತೆ ಸಂಪರ್ಕ ಉತ್ತಮವಾಗಿದೆ. ವಿದ್ಯುತ್ತು, ಅಂಚೆ, ದೂರವಾಣಿ ಸೌಕರ್ಯಗಳಿವೆ. ತಾಲ್ಲೂಕಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆ, ಕಾಲೇಜುಗಳು ಇದ್ದು ವಿದ್ಯಾಭ್ಯಾಸಕ್ಕೆ ಅನುಕೂಲಗಳಿವೆ. ಆಸ್ಪತ್ರೆ ಮತ್ತು ಔಷಧಾಲಯಗಳಿವೆ. ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿದ್ದು ತಾಲ್ಲೂಕಿನ ಕೈಗಾರಿಕೆ ಮತ್ತು ವ್ಯವಸಾಯಕ್ಕೆ ಆರ್ಥಿಕ ಸಹಾಯ ನೀಡುತ್ತಿವೆ.

	ರಾಮದುರ್ಗ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಮುಖ್ಯ ಪಟ್ಟಣ. ಮಲಪ್ರಭಾ ನದಿಯ ಎಡದಂಡೆಯ ಮೇಲೆ, ಬೆಳಗಾಂವಿ ನಗರದ ಪೂರ್ವಕ್ಕೆ 104 ಕಿಮೀ. ದೂರದಲ್ಲೂ ಬೈಲಹೊಂಗಲದ ಈಶಾನ್ಯಕ್ಕೆ 72ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 26,639 (2001)

	ಇದೊಂದು ಮುಖ್ಯ ವ್ಯಾಪಾರಕೇಂದ್ರ. ಇಲ್ಲಿ ಶೇಂಗಾ, ಹತ್ತಿ ಮತ್ತು ದ್ವಿದಳ ಧ್ಯಾನಗಳ ವ್ಯಾಪಾರ ನಡೆಯುತ್ತದೆ. ಈ ಪಟ್ಟಣದ ಪೂರ್ವಕ್ಕೆ 48ಕಿಮೀ ದೂರದಲ್ಲಿ ಬಾದಾಮಿಯ ರೈಲ್ವೆ ನಿಲ್ದಾಣವಿದೆ. ಈ ಪಟ್ಟಣಕ್ಕೆ ವಿದ್ಯುತ್, ಅಂಚೆ, ದೂರವಾಣಿ ಸಂಪರ್ಕ ಸೌಲಭ್ಯಗಳಿವೆ. ವಿe್ಞÁನ ಮತ್ತು ಕಲಾ ಕಾಲೇಜು, ಪ್ರೌಢ, ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಗಳು ಇವೆ. ಆಸ್ಪತ್ರೆಗಳೂ ಇದ್ದು ವೈದ್ಯಕೀಯ ಸೌಲಭ್ಯವಿದೆ. ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿವೆ. ಶಿವಾಜಿ ಕಾಲದ್ದೆಂದು ಹೇಳುವ ಒಂದು ಹಳೆಯ ಕೋಟೆ ಈ ಪಟ್ಟಣದಲ್ಲಿದೆ.

	1671ರಲ್ಲಿ ರಾಮದುರ್ಗವನ್ನು ಶಿವಾಜಿಯು ಭಾವೆ ಮನೆತನದವರಿಗೆ ನೀಡಿದ. ನರಗುಂದ ಸಂಸ್ಥಾನದ ಒಂದು ಭಾಗವಾಗಿದ್ದು ಮುಂದೆ ಈ ಮನೆತನದ ಇಬ್ಬರು ಸೋದರರಲ್ಲಿ ಆಸ್ತಿ ಹಂಚಿಕೆಯಾಗಿ ಪ್ರತ್ಯೇಕ ಸಂಸ್ಥಾನವಾಗಿ ರೂಪುಗೊಂಡಿತು. ಬಹುಶಃ ಇದರ ಸ್ವತಂತ್ರ ಅಸ್ತಿತ್ವ 19ನೆಯ ಶತಮಾನದ ಆದಿ ಭಾಗದಲ್ಲಿ ಆಗಿರಬೇಕು. ಈ ಕಾಲದಲ್ಲಿ ಮುರಾರಿರಾವ್ ಭಾವೆ ಎಂಬ ರಾಮದುರ್ಗದ ಒಬ್ಬ ಸಂಸ್ಥಾನಿಕನ ಹೆಸರು ಕಂಡುಬರುತ್ತದೆ. ಈತನಿಗೆ ಮಕ್ಕಳಿರಲಿಲ್ಲವಾಗಿ ಇವನ ವಿಧವೆ ಪತ್ನಿ ಒಬ್ಬ ದತ್ತುಪುತ್ರನನ್ನು ಪಡೆದುದನ್ನು ಕಂಪನಿ ಸರಕಾರ ಮಾನ್ಯಮಾಡಿತ್ತು (1828). 437.69 ಚಕಿಮೀ ವಿಸ್ತೀರ್ಣವಿದ್ದ ಈ ಸಂಸ್ಥಾನ ಸ್ವಾತಂತ್ರ್ಯನಂತರ ಬೆಳಗಾಂವಿ ಜಿಲ್ಲೆಯಲ್ಲಿ ಲೀನವಾಯಿತು.

	ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಇಲ್ಲಿ ನಡೆದ ಒಂದು ತೀವ್ರ ಚಳವಳಿಯಿಂದಾಗಿ ಈ ಪಟ್ಟಣ ಖ್ಯಾತಿಗೆ ಬಂತು ಸಂಸ್ಥಾನದಲ್ಲಿ ಅನೇಕ ವರ್ಷ ಬರಗಾಲ ಇದ್ದುದರಿಂದ ಕಂದಾಯ ಮಾಫಿ ಮಾಡಲು ಜನ ಚಳವಳಿ ನಡೆಸಿದ್ದರು. ಕಾಂಗ್ರೆಸಿನ ಮಧ್ಯಸ್ಥಿಕೆಯಿಂದ ಅರಸರಿಗೂ ಜನರಿಗೂ ಒಂದು ಒಪ್ಪಂದವಾಗುವ ಪರಿಸ್ಥಿತಿ ಉಂಟಾದರೂ ಕೆಲವು ನಾಯಕರು ಪ್ರಕ್ಷುಬ್ಧ ಭಾಷಣ ಮಾಡಿ ಜನರನ್ನು ರೊಚ್ಚಿ ಗೆಬ್ಬಿಸಿದರು. ಪ್ರಕ್ಷೋಭಕರ ಭಾಷಣ ಮಾಡಿದ ನಾಯಕರಿಬ್ಬರ ಬಂಧನವಾಗಲು ಅವರ ಬಿಡುಗಡೆಗಾಗಿ 7-4-1939ರಲ್ಲಿ ಜನರು ರಾಮದುರ್ಗ ಜೈಲಿನ ಮೇಲೆ ಧಾಳಿಮಾಡಿ ಎಂಟು ಮಂದಿ ಪೋಲಿಸರನ್ನು ಕೊಂದರು. ಈ ದುರಂತದ ಪರಿಣಾಮವಾಗಿ ನಡೆದ ಖಟ್ಲೆಯಲ್ಲಿ ಆರು ಜನರಿಗೆ ಫಾಸಿ ಶಿಕ್ಷೆಯಾಗಿ ಅನೇಕರಿಗೆ ಜೈಲು ಶಿಕ್ಷೆ ಆಯಿತೆಂದು ತಿಳಿದುಬರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ